ಅಸೋಸಿಯೇಷನ್ ನಡೆದು ಬಂದ ಹಾದಿ


ಫೆಬ್ರುವರಿ 1926 ರ ಒಂದು ಹೊಂಬಿಸಿಲಿನ ಭಾನುವಾರದಂದು ಮುಂಬಯಿಯಲ್ಲಿದ್ದ ಕೆಲವು ಮೈಸೂರಿನ ತರುಣ ಉತ್ಸಾಹಿಗಳು ಸೇರಿ ತಮ್ಮ ಸಾಂಸ್ಕೃತಿಕ ಜೀವನಕ್ಕೊಂದು ನೆಲೆಯನ್ನು ಉಂಟುಮಾಡಲು ತೀರ್ಮಾನಿಸಿದಾಗ ಮೊದಲಾಯಿತು ಮೈಸೂರು ಆಸೋಸಿಯೇಷನ್ ನ ಪಯಣ ಗಾಧಾ.

ದಿವಾನ್ ಬಹದ್ದೂರ್ ಕೆ. ರಾಮಸ್ವಾಮಿಯವರೇ ಮೊದಲ ಅಧ್ಯಕ್ಷರಾದರು. 

ಆಗಸ್ಟ್, 1926 ರಂದು, ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ, ಪ್ರಾ. ಸುಬ್ಬರಾಯರ  ನಲುಗೈಯಿಂದ ಮೈಸೂರು ಅಸೋಸಿಯೇಷನ್ನಿನ ಉದ್ಘಾಟನೆ ಬಾಡಿಗೆಯ ಕೋಣೆಯೊಂದರಲ್ಲಿ ನೆರವೇರಿತು.

1932 ರಲ್ಲಿ ಮುಂಬೈ ಮಹಾಪಾಲಿಕೆ ಮಾಟುಂಗಾದ ಭಾವು ದಾಜಿ ರಸ್ತೆಯಲ್ಲಿ ನಿರಂತರ ಗುತ್ತಿಗೆಯ ಮೇಲೆ ನಿವೇಶನವನ್ನು ಅಸೋಸಿಯೇಷನ್ನಿಗೆ ನೀಡಿದ್ದರ ಫಲವಾಗಿ, 1934 ರಲ್ಲಿ ಅಸೋಸಿಯೇಷನ್ ಸದಸ್ಯರ ದೇಣಿಗೆಯಿಂದ ಕೂಡಿದ 6000 ರೂಪಾಯಿಗಳ ವೆಚ್ಚದಲ್ಲಿ, ಅದೂ ಜಾಗತಿಕ ಆರ್ಥಿಕ ಕುಸಿತದ ನಡುವಿನಲ್ಲೂ ಮೈಸೂರು ಅಸೋಸಿಯೇಷನ್ನಿನ ಸ್ವಂತವಾದ ಮೊದಲ ಕಟ್ಟಡ “ವಾಣಿವಿಲಾಸ್ ಹಾಲ್” ತಲೆಎತ್ತಿ ನಿಂತಿತೆಂಬುದು ಹೆಮ್ಮೆಯ ಸಂಗತಿ.

ಈ ಕಟ್ಟಡವನ್ನು 1941, 1944, 1969, 1978, 1998 ಹಂತ ಹಂತವಾಗಿ ವಿಶಾಲವಾಗಿ ಎತ್ತರಿಸಲಾಯಿತು.

ಈ ಕಟ್ಟಡವನ್ನು ವಿಶಾಲಗೊಳಿಸಿದವರಲ್ಲಿ ನಾವು  ಶ್ರೀ. ಬಿ.ವಿ.ಎಸ್ ಐಯಂಗಾರ್,   ಶ್ರೀ. ಅರ್.ಡಿ. ಚಾರ್,   ಶ್ರೀ. ಎ. ನಾಗಭೂಷಣ ರಾವ್,  ಶ್ರೀ. ಟಿ.ಎಸ್. ಚಂಪಕನಾಥ್,  ಶ್ರೀ. ಎಸ್. ದೊರೆಸ್ವಾಮಿ ಮತ್ತೆ ಇನ್ನಿತರ ಹಲವಾರು ಸದಸ್ಯರನ್ನು ನೆನೆಯಬೇಕು.

ಹೆಸರಾಂತ ನಿರ್ಮಾಣ ತಜ್ಞ, ಶ್ರೀ.ಎ.ನಾಗಭೂಷಣರಾಯರ ನೇತೃತ್ವದಲ್ಲಿ ಒಂದು ಆಧುನಿಕ ರಂಗಮಂದಿರದ ಯೋಜನೆ ತಯಾರಾಯಿತು.

ಇಂದಿನ ಅಸೋಸಿಯೇಷನ್ ಕಟ್ಟಡ ಹಾಗೂ ಪರಿಸರ ಈ ಕನಸಿನ ಹಾಗೂ ನಾಲ್ಕು ಪೀಳಿಗೆಯ ಸತತ ದುಡಿಮೆಯ ಹೆಗ್ಗುರುತಾಗಿ ನಿಂತಿದೆ.

ಆಳಿದ ಮಹಾಸ್ವಾಮಿಗಳಾದ ಶ್ರೀ.ಕೃಷ್ಣರಾಜೇಂದ್ರ ಒಡೆಯರ್, ಹಾಗೂ ಶ್ರೀ. ಜಯಚಾಮ ರಾಜೇಂದ್ರ ಒಡೆಯರ್ ಅವರುಗಳು ಅಸೋಸಿಯೇಷನ್ನಿಗೆ ಭೇಟಿ ನೀಡಿ ಮೆಚ್ಚಿದ ಹಲವಾರು ಮಹನೀಯರಲ್ಲಿ ಮೊದಲಿಗರು.

ನಂತರ ಅಂದಿನ ಮೈಸೂರು ರಾಜ್ಯದ ದಿವಾನರುಗಳಾದ ಸರ್. ಮಿರ್ಜಾ ಇಸ್ಮಾಯಿಲ್, ಸರ್. ಅರ್ಕಾಡ್ ರಾಮಸ್ವಾಮಿ ಮೊದಲಿಯಾರ್, ಸರ್.ಎಂ.ವಿಶ್ವೇಶ್ವರಯ್ಯನವರಲ್ಲದೆ ಆಧುನಿಕ ಕರ್ನಾಟಕದ ಎಲ್ಲ ಮುಖ್ಯಮಂತ್ರಿಗಳೂ ಅಸೋಸಿಯೇಷನ್ನಿಗೆ ಭೇಟಿ ನೀಡಿದ್ದಾರೆ.

ಮೈಸೂರು ಅಸೋಸಿಯೇಷನ್ನಿನ ಸದಸ್ಯರುಗಳು ಎಲ್ಲರೂ ಪರಿಣತರೂ ಆಗಿದ್ದಲ್ಲದೆ, ವಾಸ್ತುಶಿಲ್ಪಿಗಳು ಉದ್ಯೋಗ ಮಾಲೀಕರು, ವಕೀಲರು, ಎಂಜೀನಿಯರ್ ಗಳು,  ಚಲನಚಿತ್ರೋದ್ಯಮಿಗಳು, ಹಾಗೂ ಕಲಾಕಾರರೂ ಮತ್ತಿತರ ಕ್ಷೇತ್ರಗಳಿಂದ ಬಂದಿರುತ್ತಾರೆ. ಈ ಮಹನೀಯರು  ಹಾಗೂ ಮಹಿಳೆಯರೇ, ತಾವೇ ಕ್ರೀಡಾಪಟುಗಳಾಗಿ ಅಧ್ಯಾಪಕರಾಗಿ, ಸಾಮಾಜಿಕ ಕಾರ್ಯಕರ್ತರುಗಳಾಗಿ, ನಾಟಕಕಾರರಾಗಿ, ನಟರಾಗಿ, ದುಡಿದು ಈ ನಗರದ ಸಂಪತ್ತನ್ನು ಹೆಚ್ಚಿಸಿದ್ದಾರೆ.

30 ರ ದಶಕದಲ್ಲಿ ವಾಲಿಬಾಲ್ ಹಾಗೂ 40-60 ದಶಕಗಳಲ್ಲಿ ಬಾಸ್ಕೆಟ್ ಬಾಲ್  ಅಸೋಸಿಯೇಷನ್ ತಂಡ 1949, 50, 51 ರಲ್ಲಿ ಮುಂಬಯಿಯ ಪ್ರಾಂತ್ಯದ ಅಜೇಯ ತಂಡವಾಗಿತ್ತು ಎನ್ನುವುದು ಅವಿಸ್ಮರಣೀಯ.

ಮುಂಬಯಿ ರಾಜ್ಯದ 1950 ರ ಅಧಿಕೃತ 5 ಮಂದಿಯ ಬಾಸ್ಕೆಟ್ ಬಾಲ್ ತಂಡದಲ್ಲಿ 4 ಆಟಗಾರರು ಅಸೋಸಿಯೇಷನ್ ತಂಡದ ಸದಸ್ಯರಾಗಿದ್ದರೆಂಬುದು ಇಲ್ಲಿ ಉಲ್ಲೇಖಾರ್ಹ.  ಶ್ರೀ. ಕೆ. ಎಸ್. ಐಯಂಗಾರ್,  ಶ್ರೀ. ಸುಬ್ಬರಾವ್,  ಶ್ರೀ. ಬಾಬು ರಾಮಸ್ವಾಮಿ ಮತ್ತು
ಶ್ರೀ. ಪಾರ್ಥಸಾರಥಿ ಈ ತಂಡದಲ್ಲಿದ್ದರೆಂಬುದನ್ನು ಇಲ್ಲಿ ನೆನೆಯಬಹುದು.

ಶ್ರೀ. ಬಿ.ವಿ.ಎನ್.ಐಯಂಗಾರ್ ಅವರ ಬೆಳ್ಳಿಯ ಫಲಕದ ಟೇಬಲ್  ಟೆನ್ನಿಸ್ ಪಂದ್ಯ 1940 ರಿಂದ ಚಾಲನೆಯಲ್ಲಿದೆ.
ಶ್ರೀ. ದಿಲೀಪ್ ಸಂಪತ್ ಹಾಗೂ ಶ್ರೀ. ಶ್ರೀರಾಮ್ ಅಂತಹ ರಾಷ್ಟ್ರವಿಖ್ಯಾತ ಪಟುಗಳು ಈ ಪಂದ್ಯದಲ್ಲಿ ಭಾಗವಹಿಸಿದ್ದಾರೆ.
 

ಬಿಲಿಯರ್ಡ್ಸ್ ಆಟಕ್ಕೆ ಕಾರಣರಾದವರು, ಮುಂಬಯಿಯ ಶ್ರೀ ನಾನ್ಜೀ ಪ್ರೇಮ್ಜೀ ದಾರ್ಸಿಯವರು. ಅವರು 1930 ರಲ್ಲಿ ಬಿಲಿಯರ್ಡ್ಸ್ ಮೇಜೊಂದನ್ನು ದಾನ ನೀಡಿದರು. ಅವರ ನೆನಪಿನಲ್ಲಿ ಅಸೋಸಿಯೇಷನ್ ಒಂದು ಬೆಳ್ಳಿಯ ಕರಂಡದ ಬಹುಮಾನವನ್ನು ಸ್ಥಾಪಿಸಿದೆ.
ಶ್ರೀ. ಎನ್.ಸುಬ್ರಹ್ಮಣ್ಯನ್, ಶ್ರೀ. ಎಲ್. ಡಿ. ಚಾರ್, ಶ್ರೀ. ಪಿ. ಎನ್. ರಾಮರಾವ್,  ಶ್ರೀ. ಎಸ್. ಎನ್. ನಾಗರಾಜರಾವ್,   ಶ್ರೀ. ಸತ್ಯನಾರಾಯಣ ಮತ್ತು ಶ್ರೀ. ಎಚ್. ಎಸ್. ನೀಲಕಂಠ ಅವರುಗಳು ಈ ಆಟದ ಬೆಳವಣಿಗೆಗೆ ಬಹಳವಾದ ಕೊಡುಗೆಯನ್ನು ನೀಡಿದ್ದಾರೆ.

ಅಸೋಸಿಯೇಷನ್ ಸ್ಥಾಪಿಸಿದ ಹಿರಿಯರ ಗುರಿಗಳಲ್ಲಿ ವಿದ್ಯಾಭ್ಯಾಸವನ್ನು ಕೈಗೂಡಿಸುವುದೂ ಒಂದಾಗಿತ್ತು. 1927 ರಲ್ಲಿಯೇ ಮೊದಲ ಕಾರ್ಯದರ್ಶಿಗಳಾಗಿದ್ದ ಸಾಹಿತಿ ಶ್ರೀ. ಚಂದ್ರಶೇಖರ ಶರ್ಮರವರು ಒಂದು ಪ್ರಾಥಮಿಕ ಶಾಲೆಯನ್ನು ಅಸೋಸಿಯೇಷನ್ನಿನಲ್ಲಿ ಓರ್ವ ಅಧ್ಯಾಪಕಿಯ ನೇಮಕದಿಂದ ಮೊದಲು ಮಾಡಿದ್ದರು. ಮುಂದೆ ಈ ಶಾಲೆ ಪ್ರತ್ಯೇಕವಾಗಿ ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿಯ ಶಾಲೆಯಾಗಿ ನಿರ್ಮಾಣವಾಯಿತು. ಇಂದು ಈ ಶಾಲೆ ಆರ್ಥಿಕವಾಗಿ ಹಿಂದಿರುವ ಧಾರಾವಿ, ಆಂಟಪ್ಹಿಲ್ ಮತ್ತು ವಡಾಲಾ ಪ್ರಾಂತ್ಯ ನೆಲೆಗಳಿಂದ ಬರುವ 2500 ವಿದ್ಯಾರ್ಥಿಗಳಿಗೆ ಶಿಶುವಿಹಾರದಿಂದ ಹತ್ತನೆಯ ತರಗತಿಯವರೆಗೆ, ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮಗಳಲ್ಲಿ, ವಿದ್ಯಾಭ್ಯಾಸವನ್ನು ನೀಡುತ್ತಿದೆ. ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿ, ಜೂನಿಯರ್ ಕಾಲೇಜ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಮೆನೇಜ್ಮೆಂಟ್ ಕಾಲೇಜ್ ಗಳನ್ನು ನಡೆಸುತ್ತಿದೆ. ಈ ಶಾಲೆಯಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿದ್ದಾರೆ. ಈ ಶಾಲೆಯನ್ನು ಕಟ್ಟುವುದರಲ್ಲಿ
ಶ್ರೀ. ಆರ್. ಡಿ. ಚಾರ್ ,  ಶ್ರೀಮತಿ ವೈದೇಹಿ ಚಾರ್,  ಶ್ರೀ. ಎಂ. ವರದರಾಜನ್,  ಶ್ರೀ. ಬಿ. ನಾರಾಯಣ ಸ್ವಾಮಿ,  ಶ್ರೀ. ಆರ್. ವೆಂಕಟೇಶ್ ಮೂರ್ತಿ,  ಶ್ರೀ. ಮಾಗಲ್,  ಶ್ರೀ. ಎ. ಎಸ್. ಕೆ. ರಾವ್,  ಶ್ರೀ. ಎಸ್. ಸುಬ್ರಮಣಿ ಅವರುಗಳ ಕೊಡುಗೆ ಹಿರಿಯದಾಗಿದೆ.

ಲಲಿತ ಕಲೆಗಳಲ್ಲಿ ಅಸೋಸಿಯೇಶನ್ ಮಂಚೂಣಿಯಲ್ಲಿದೆ. ಚಿತ್ರಕಲೆಯಲ್ಲಿ ಅಸೋಸಿಯೇಷನ್ ಕರ್ನಾಟಕ – ಮಹಾರಾಷ್ಟ್ರ ಹಲವಾರು ವಿಖ್ಯಾತ ಚಿತ್ರಗಾರರನ್ನು ಸನ್ಮಾನಿಸಿದೆ. ಬಾಂಬೆ ಆರ್ಟ್ಸ್ ಸೊಸೈಟಿಯ ಜೊತೆಯಲ್ಲಿ ಸೇರಿ 1976, 1986, 1988 ಹಾಗೂ 1998, 2001 ರಲ್ಲಿ ಹಿರಿಯ ಚಿತ್ರ ಪ್ರದರ್ಶನಗಳನ್ನು ಜರುಗಿಸಿದೆ.

ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ ಪ್ರತಿ ವರ್ಷ ಜರುಗಿಸಲ್ಪಡುತ್ತಿತ್ತು.

1946 ರಲ್ಲಿ ಮೊದಲಾದ ಮಹಾಗಣಪತಿ ಹಬ್ಬದಲ್ಲಿ ಸಂಗೀತ - ನೃತ್ಯ ಉತ್ಸವಗಳನ್ನು ನಡೆಸುತ್ತಿದೆ. ಕರ್ನಾಟಕ, ಹಿಂದೂಸ್ಥಾನಿ ಶೈಲಿಯ ಹಲವಾರು ಸಂಗೀತ ಕಲಾವಿದರು ಈ ಉತ್ಸವಗಳಲ್ಲಿ ಪಾಲುಗೊಂಡಿದ್ದಾರೆ. ಶ್ರೀ. ಆರ್. ಕೆ. ಶ್ರೀಕಂಠನ್, ವಿದ್ವಾನ್ ದೊರೆಸ್ವಾಮಿ ಐಯಂಗಾರ್, ಶ್ರೀ. ಚೌಡಯ್ಯ, ಶ್ರೀಮತಿ ಗಂಗೂಬಾಯಿ ಹಾನಗಲ್, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್, ಪಂಡಿತ್ ಭೀಮಸೇನ್ ಜೋಷಿ, ಪಂಡಿತ್ ಕಾರ್ತಿಕ್ ಕುಮಾರ್, ಪಂಡಿತ್ ಬಾಲೆ ಖಾನ್ ಮೊದಲಾದವರನ್ನು ಇಲ್ಲಿ ನೆನೆಯಬಹುದು.

ಅಸೋಸಿಯೇಷನ್ ಹಲವಾರು ನೃತ್ಯೋತ್ಸವಗಳನ್ನು ಜರುಗಿಸಿದೆ. 1986 ರಲ್ಲಿ ನೃತ್ಯ ಕರ್ನಾಟಕ-ಮೈಸೂರು ಶೈಲಿಯನ್ನು ಕುರಿತಾಗಿತ್ತು. ಹಲವಾರು ಹೆಸರಾಂತ ಕಲಾವಿದರು ಈ ಉತ್ಸವಗಳಲ್ಲಿ ಪಾಲುಗೊಂಡಿದ್ದಾರೆ.
ಶ್ರೀಮತಿ ಪದ್ಮಿನಿ,  ಶ್ರೀಮತಿ ವೈಜಯಂತಿಮಾಲಾ, ಶ್ರೀಮತಿ ವೆಂಕಟಲಕ್ಷ್ಮಮ್ಮ , ಶ್ರೀಮತಿ ಲಲಿತಾ ಶ್ರೀನಿವಾಸನ್, ಶ್ರೀಮತಿ ಪದ್ಮಿನಿ ರವಿ, ಶ್ರೀಮತಿ ಸುಧಾ ದೊರೆಸ್ವಾಮಿ, ಶ್ರೀಮತಿ ಗೀತಾ ವಿಶ್ವನಾಥ್,  ಶ್ರೀಮತಿ ಶಚೀದೇವಿ ಅಲ್ಲದೆ ಇನ್ನೂ ಹಲವರು ಇಲ್ಲಿ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಅಸೋಸಿಯೇಷನ್ ಸ್ವತಃ ಹಲವಾರು ನೃತ್ಯರೂಪಕಗಳನ್ನು ನಿರ್ಮಾಣ ಮಾಡಿದೆ. ಶ್ರೀಮತಿ ಗೀತಾ ವಿಶ್ವನಾಥ್ ಅವರು ರಚಿಸಿದ
ಕೃಷ್ಣಾಯ ತುಭ್ಯಂ, ಭಜ ಗೋವಿಂದಂ, ಶ್ಯಾಮಾಲಾ ದಂಡಕಂ, ಕೃಷ್ಣ ನೀ ಬೇಗನೆ ಬಾರೋ, ಕೋಳೂರು ಕೊಡಗೂಸು, ಕೃಷ್ಣ ಕರ್ಣಾಮೃತಂ,  ಅಂತ:ಪುರ ಗೀತೆಗಳು  ಇವುಗಳಲ್ಲಿ ಕೆಲವು.

ಶ್ರೀ ರಾಜ ರಾಜೇಶ್ವರಿ ನಾಟ್ಯ ಕಲಾ ಶಾಲೆಯ ಗುರು ಮಹಾಲಿಂಗಂ ಪಿಳ್ಳೆ,  ಗುರು ಕಲ್ಯಾಣ ಸುಂದರಂ, ಶ್ರೀಮತಿ ರಾಜೀನಾರಾಯಣ್ ಅವರುಗಳ ಕೊಡುಗೆಯನ್ನು ಇಲ್ಲಿ ನೆನೆಯಬೇಕು.

ಶ್ರೀಮತಿ ಸೀತಮ್ಮ ರಾವ್ ಅವರ 'ಶ್ರೀ ಪುರಂದರ ದಾಸ' ನೃತ್ಯ ರೂಪಕ ಜನಗಳ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ.

1986 ರಲ್ಲಿ ಕರ್ನಾಟಕ-ಮಹಾರಾಷ್ಟ್ರಗಳ ಜಾನಪದ ಕಲೆಗಳ 4 ದಿನಗಳ ಉತ್ಸವದಲ್ಲಿ ಶತಮಾನಗಳಿಂದ ರೂಪಿತವಾಗಿರುವ  ಕನ್ನಡ ಮರಾಠಿ ಜನಪದ ಭಾವನೆಗಳಿಗೆ ಪ್ರಕಾಶ ನೀಡಲಾಯಿತು. ಈ ಉತ್ಸವದಲ್ಲಿ ಅನೇಕಾನೇಕ ಹೆಸರಾಂತ ಜಾನಪದ ಲೋಕನೃತ್ಯ ಕಲಾವಿದರು ಪಾಲುಗೊಂಡಿದ್ದರು.

1934 ರಲಿಯೇ ಕರ್ನಾಟಕ ಸಂಘದ ಜೊತೆಗೂಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು, ಅಸೋಸಿಯೇಷನ್ ಮುಂಬಯಿಯಲ್ಲಿ ಜರುಗಿಸಿತು.

ಅನೇಕಾನೇಕ ಹೆಸರಾಂತ ಕವಿಗಳು, ಸಾಹಿತಿಗಳು ಅಸೋಸಿಯೇಷನ್ನಿಗೆ ಭೇಟಿ ನೀಡಿದ್ದಾರೆ.

 • ಪು. ತಿ. ನ.
 • ಟಿ. ಪಿ. ಕೈಲಾಸಂ
 • ಡಿ. ವಿ. ಜಿ.
 • ಮಾಸ್ತಿ ವೆಂಕಟೇಶ ಐಯ್ಯಂಗಾರ್ 
 • ಕೆ. ಶಿವರಾಮ ಕಾರಂತ
 • ದ. ರಾ. ಬೇಂದ್ರೆ
 • ಶ್ರೀರಂಗ
 • ವಿ. ಕೆ. ಗೋಕಾಕ
 • ಜಿ. ವಿ. ರಾಜರತ್ನಂ
 • ಗಿರೀಶ್  ಕಾರ್ನಾಡ್
 • ಯು. ಆರ್. ಅನಂತ್ ಮೂರ್ತಿ
 • ಚಂದ್ರಶೇಖರ್ ಕಂಬಾರ್


ಹಲವಾರು ಅಸೋಸಿಯೇಷನ್ನಿನ ಬರಹಗಾರರು ಪ್ರಶಸ್ತಿ ಪಡೆದಿದ್ದಾರೆ.

 • ಶ್ರೀ. ಚಂದ್ರಶೇಖರ ಶರ್ಮ
 • ಶ್ರೀ. ಜಿ. ಪಿ. ರಾಜರತ್ನಂ
 • ಶ್ರೀ. ಸಿ. ಕೆ. ನಾಗರಾಜ ಮೂರ್ತಿ
 • ಶ್ರೀಮತಿ ಉಮಾರಾವ್

ನಾಟಕ ರಚನೆಯಲ್ಲಿ ಹಾಗೂ ನಾಟಕ ರಂಗದಲ್ಲಿ ಅಸೋಸಿಯೇಷನ್ನಿನ  ಕೊಡುಗೆ ಅಪಾರವಾಗಿದೆ. ಅಸೋಸಿಯೇಷನ್ನಿನ ಹಲವಾರು ಸದಸ್ಯರು 40 ಕ್ಕೂ ಮೀರಿ ನಾಟಕಗಳನ್ನು ರಚಿಸಿ, ಅನೇಕ ಪ್ರಶಸ್ತಿಗೆ ಪಾತ್ರರಾಗಿ, ನಾಟಕ ಅಕಾಡೆಮಿಯಲ್ಲಿಯೂ ದುಡಿದಿದ್ದಾರೆ.

ಕರ್ನಾಟಕದ ಗುಬ್ಬಿ ನಾಟಕ ಮಂಡಲಿಯ ಹೊರತಾಗಿ, ಅಸೋಸಿಯೇಷನ್ ಇಡೀ ಭಾರತದ ರಂಗಭೂಮಿಯಲ್ಲಿ ಜೀವಂತವಾಗಿರುವ ಅತಿ ಹಳೆಯ ನಾಟಕ ತಂಡವಾಗಿದೆ. ಇದಕ್ಕೆ 86 ವರ್ಷಗಳ ಇತಿಹಾಸವಿದೆ. 1926 ರಲ್ಲಿ ವಕೀಲರಾಗಿದ್ದ ಶ್ರೀ. ಗಂಗಾಧರಯ್ಯ ನವರಿಂದ ಆರಂಭವಾದ ಈ ರಂಗ ಚಟುವಟಿಕೆ ನಿರಂಟರವಾಗಿ ನಡೆದಿದೆ. 1926 ರಲ್ಲಿ ಶ್ರೀ. ಗಂಗಾಧರಯ್ಯನವರು ‘ವಿರಾಟಪವ್ರ’ ಹಾಗೂ ‘ಶಾಕುಂತಲ’ ನಾಟಕ ಸಾರ್ವಜನಿಕ ಪ್ರದರ್ಶನಗಳನ್ನು ನೀಡಿ ಮುಂಬಯಿಯ ಶ್ರೀಮತಿ ಯಮುನಾಬಾಯಿ ನಾಯರ್  ಆಸ್ಪತ್ರೆಗಾಗಿ ಹಣ ಸಂಗ್ರಹವನ್ನು ಮಾಡಿ ದೇಣಿಗೆ ನೀಡಿದರು.

30 ದಶಕದಲ್ಲಿ ಪೌರಾಣಿಕ, ಐತಿಹಾಸಿಕ ನಾಟಕಗಳು ಮುಂದಾಗಿದ್ದವು. 40 ರ ದಶಕದಲ್ಲಿ ಕರ್ನಾಟಕ ಪ್ರಹಸನ ಪಿತಾಮಹರೆನಿಸಿದ್ದ ಶ್ರೀ. ಟಿ. ಪಿ. ಕೈಲಾಸಂ ಅವರು ಅಸೋಸಿಯೇಷನ್ನಿನಲ್ಲಿಯೇ ತಂಗಿದ್ದು ತಮ್ಮ ಹಲವಾರು ನಾಟಕಗಳನ್ನು ಆಡಿಸಿದ್ದರು. ಇದು ಅಸೋಸಿಯೇಷನ ರಂಗ ಚಟುವಟಿಕೆಗೆ ಒಂದು ಹೊಸ ತಿರುವನ್ನು ನೀಡಿತು.

1952 ರವರೆಗೆ ಗಂಡಸರೇ ಸ್ತ್ರೀ ಪಾತ್ರವನ್ನು ಮಾಡುತ್ತಿದ್ದು, ನಂತರ ಅಸೋಸಿಯೇಷನ್ನಿನ ಮಹಿಳಾ ಸದಸ್ಯರು ಮುಂಬಯಿಯ ಕನ್ನಡ ರಂಗದಲ್ಲಿ ಹೊಸ ಇತಿಹಾಸವನ್ನು ಬರೆದರು. ಇದರಲ್ಲಿ

 • ಶ್ರೀಮತಿ ಮಧುರಾ ಕೃಷ್ಣಸ್ವಾಮಿ
 • ಶ್ರೀಮತಿ ಶಾರದಮ್ಮ ನಾರಾಯಣ ಸ್ವಾಮಿ
 • ಶ್ರೀಮತಿ ಮಹಾಲಕ್ಷ್ಮೀ ರಾವ್
 • ಶ್ರೀಮತಿ ಮೀರಾರಾವ್

ಅವರುಗಳು ಸಂಪ್ರದಾಯವನ್ನು ಮೀರಿದ್ದಲ್ಲದೆ ಇತರ ಹೆಂಗಳೆಯರಿಗೆ ರಂಗ ಚಟುವಟಿಕೆಯಲ್ಲಿ ಮುಂದುವರೆಯಲು ಪ್ರೋತ್ಸಾಹವನ್ನು ನೀಡಿದರು. ಇಂದು ಅಸೋಸಿಯೇಷನ್ನಿನ ರಂಗ ತಂಡದಲ್ಲಿ ಮಹಿಳೆಯರೇ ಪುರುಷರಿಗಿಂತ ಹೆಚ್ಚು ಸಂಖ್ಯೆಯಲ್ಲಿದ್ದಾರೆ.

ಶ್ರೀ. ವಿ. ಕೆ. ಮೂರ್ತಿಯವರು ಹೆಸರಾಂತ ಚಲನಚಿತ್ರ  ಛಾಯಾಂಕನಕಾರರಷ್ಟೇ ಆಗಿರದೆ 40, 50 ಮತ್ತು 60 ರ ದಶಕಗಳಲ್ಲಿ ಅಸೋಸಿಯೇಷನ್ನಿನ ರಂಗಚಟುವಟಿಕೆಯಲ್ಲೂ ಮುಂದಾಳಾಗಿದ್ದರು. ಇವರೊಂದಿಗೆ

 • ಶ್ರೀ. ಎಂ. ಎನ್ ರಾಮಚಂದ್ರರಾವ್
 • ಶ್ರೀ. ಜಯಭೀಮರಾವ್
 • ಶ್ರೀ. ಬಿ. ದುಗ್ಗಪ್ಪಯ್ಯ ನಾಡಿಗ್
 • ಶ್ರೀ. ಸಿ. ಎಸ್. ಪುಟ್ಟಣ್ಣಯ್ಯ
 • ಶ್ರೀ. ಎನ್. ವಿ. ಶ್ರೀನಿವಾಸ್
 • ಶ್ರೀ. ಸಿ. ಕೆ. ಶಂಕರನಾರಾಯಣರಾವ್

ಸೇರಿ ಮುಂಬಯಿಯ ರಂಗಭೂಮಿಯಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದರು.

70 ರ ದಶಕದಲ್ಲಿ, ಪ್ರಹಸನ, ಅಣಕಗಳನ್ನು ಬಿಟ್ಟು ಸಾಮಾಜಿಕ ದಿಟಗಳನ್ನು ಎತ್ತಿಹಿಡಿಯುವ, ಹೊಸ ಪೀಳಿಗೆಯ ನಾಟಕಕಾರರು ಅಸೋಸಿಯೇಷನ್ನಿನಲ್ಲಿ ಮುಂದಾದರು.

70ರ ಹಾಗೂ 80 ರ ದಶಕಗಳಲ್ಲಿ ಅಸೋಸಿಯೇಷನ್ನಿನ ತಂಡ ಹವ್ಯಾಸಿಯ ಕಟ್ಟಿನಿಂದ ಹೊರಬಂದು ವೃತ್ತಿ ಹಾಗೂ ಪ್ರಗತಿ ಪರವಾಗಿ, ಆಂಗಿಕ, ಸಾಂಗತ್ಯ, ಸಂಗೀತ ಹಾಗೂ ಕುಣಿತಗಳನ್ನು ಆಳವಡಿಸಿಕೊಂಡು ಒಂದು ಸಂಪೂರ್ಣವಾದ ರಂಗ ಚೌಕಟ್ಟನ್ನು ಹೊಸದಾಗಿ ಕಟ್ಟುವುದರಲ್ಲಿ ಯಶಸ್ವಿಯಾಯಿತು. ಈ ದಿಶೆಯಲ್ಲಿ

 • ಡಾ.ಬಿ. ಆರ್. ಮಂಜುನಾಥ್
 • ಶ್ರೀ. ಕೆ. ಮಂಜುನಾಥ್
 • ಶ್ರೀ. ದುಗ್ಗಪ್ಪಯ್ಯ ನಾಡಿಗ್
 • ಶ್ರೀಮತಿ ಉಷಾ ಜೈರಾಮ್
 • ಶ್ರೀಮತಿ ಕುಂತಿ ದುಗ್ಗಪ್ಪಯ್ಯ
 • ಶ್ರೀಮತಿ ಉಮಾ ಪ್ರಭಾಕರ್
 • ಶ್ರೀ ಮತಿ ಗೀತಾ ವಿಶ್ವನಾಥ್
 • ಸರಿತಾ ಜೈರಾಮ್

ಅವರುಗಳ ಕೊಡುಗೆ ಅಪಾರವಾದುದು.

ಅಸೋಸಿಯೇಷನ್ ಕನ್ನಡ ಸಾಹಿತ್ಯದ ಹಲವಾರು ಕಾದಂಬರಿ, ಸಣ್ಣ ಕತೆಗಳನ್ನು ನಾಟಕವಾಗಿ ರೂಪಾಂತರಗೊಳಿಸಿತು.

 • ಬೆಕ್ಕಿನ ಕಣ್ಣು
 • ಬಿಸಿಲ್ಗುದುರೆ
 • ಬೆಳ್ಳಿ ಬೈಲು
 • ಬಿತ್ತಿ  ಬೆಳೆದದ್ದು
 • ಬೆಂದ ಕಾಳೂರು
 • ಹೂ ಗಿಡದಲ್ಲಿ ಹೂವರಳಿಹುದು
 • ಹೀರಾ
 • ಕೂಪಮಂಡೂಕ
 • ವಿಗಡ ವಿಕ್ರಮರಾಯ
 • ನಾ ದ್ಯಾವ್ರರನ್ನ ನೋಡ್ಬ್ಯಾಕು

ಮತ್ತಿತರ ನಾಟಕಗಳು ನಾಟಕರಂಗದಲ್ಲಿ ಮೈಲಿಗಲ್ಲುಗಳಾದವು.

ಅಸೋಸಿಯೇಶನ್ನಿನ ತಂಡ ಕರ್ನಾಟಕ ಮಹಾರಾಷ್ಟ್ರ ಗುಜರಾತ್ ನಲ್ಲೆಲ್ಲಾ ನಾಟಕ ಪ್ರದರ್ಶಿಸಿ ಮೆಚ್ಚುಗೆಗಳಿಸಿತು.

ಇಂದು ಅಸೋಸಿಯೇಷನ್ನಿನ ತಂಡದಲ್ಲಿ 4 ಪೀಳಿಗೆಗಳು ಒಟ್ಟಾರೆ ಒಂದೇ ರಂಗ ಮಂಚದಲ್ಲಿ ಹಾಡಿ, ಕುಣಿದು ಮುಂದಿನ ಪೀಳಿಗೆಗಳನ್ನು ಅಣಿ ಮಾಡುತ್ತಿವೆ.

ಹೀಗೆ ದುಡಿದ ಕಲಾವಿದರ ಪಟ್ಟಿ ಉದ್ದವಾಗಿದೆ. ಅದರಲ್ಲಿ

 • ಶ್ರೀಮತಿ ಮಧುರಾ ಕೃಷ್ಣಸ್ವಾಮಿ
 • ಶ್ರೀ. ವಿ. ಕೆ. ಮೂರ್ತಿ
 • ಶ್ರೀಮತಿ ಸಂಧ್ಯಾ ಮೂರ್ತಿ
 • ಶ್ರೀಮತಿ ಸುಶೀಲಾ ರಾವ್
 • ಶ್ರೀಮತಿ ಗೀತಾ ವಿಶ್ವನಾಥ್
 • ಡಾ. ಬಿ. ಆರ್. ಮಂಜುನಾಥ್
 • ಶ್ರೀ. ಕೆ. ಮಂಜುನಾಥಯ್ಯ
 • ಶ್ರೀ. ದುಗ್ಗಪ್ಪ ನಾಡಿಗ್
 • ಶ್ರೀಮತಿ ಕುಂತಿ ನಾಡಿಗ್
 • ಶ್ರೀ. ರಾಘವೇಂದ್ರ
 • ಶ್ರೀಮತಿ ಮಾನಸಾ
 • ಶ್ರೀಮತಿ ಉಷಾ ಜೈರಾಮ್
 • ಶ್ರೀಮತಿ ರಮಾ ಹರಿಹರನ್
 • ಶ್ರೀಮತಿ ರಮಾ ವೆಂಕಟೇಶ್
 • ಶ್ರೀಮತಿ ಭಾರತಿ ಪ್ರಸಾದ್
 • ಶ್ರೀ ಮ.ಅ. ನಾ. ಪ್ರಸಾದ್
 • ಶ್ರೀಮತಿ ಲಲಿತಾ ಬಾಲು
 • ಕುಮಾರಿ ಸರಿತಾ ಜೈರಾಮ್
 • ಶ್ರೀ ಗುರುದತ್ತ್ ರಾವ್
 • ಮತ್ತಿತರು.


ಅಸೋಸಿಯೇಷನ್ನಿನ ಹಲವಾರು ಸದಸ್ಯರು ಸಮಾಜ ಸೇವೆಯಲ್ಲಿ ತಮ್ಮ ಕೊಡುಗೆಯನ್ನು ಇತ್ತಿದ್ದಾರೆ.
ಶ್ರೀಮತಿ ವೈದೇಹಿ ಚಾರ್ ಹಾಗೂ ಶ್ರೀಮತಿ ಶ್ಯಾಮಲಾಂಬಾ ಅವರು 40 ಹಾಗೂ 50 ರ ದಶಕಗಳಲ್ಲಿ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಗಾಗಿ ದುಡಿದರು.

ಶ್ರೀಮತಿ ಉಷಾ ಜೈರಾಮ್ ಅವರು ಬೀದಿಯ ಮಕ್ಕಳ ಶಿಕ್ಷಣ ಹಾಗೂ ಅಭಾಗಿನಿಯರ ಏಳಿಗೆಗೆ ದುಡಿದರು. ಲಾತೂರ್ನಲ್ಲಿ ಭೂಕಂಪ ಹಾಗೂ ಧಾರಾವಿಯಲ್ಲಿ 1992 ರ ದಂಗೆಯಲ್ಲಿ ನೊಂದವರಿಗೆ ಸಾಂತ್ವನ ಹಾಗೂ ಹಣದ ಸಹಾಯ ಮಾಡಿದರು.
ಶ್ರೀಮತಿಯರಾದ ಭವಾನಿ ಸುಂದರರಾಜ್, ಪೂರ್ಣಿಮಾ ಶ್ರೀಕೃಷ್ಣ, ಗೀತಾ ವಿಶ್ವನಾಥ್, ಲಕ್ಷ್ಮೀದಾಸಪ್ಪ, ಸತ್ಯವತಿ ಪ್ರಸನ್ನ, ಲಲಿತಾ ದೊರೆಸ್ವಾಮಿ ಅವರ ಕೊಡುಗೆಗಳನ್ನು ಮರೆಯುವಂತಿಲ್ಲ.

ಕಾಲಾಂತರದಲ್ಲಿ ಅಸೋಸಿಯೇಷನ್, ಅಖಿಲ ಭಾರತ ಮಹಿಳಾ ಸಂಘಟನೆ ಜೊತೆಯಲ್ಲಿ ನಿಕಟ ಬಾಂಧವ್ಯವನ್ನು ಬೆಳೆಸಿಕೊಂಡು ಆ ಸಂಸ್ಥೆ ನಡೆಸುತ್ತಿರುವ ಸಮಾಜ ಸೇವೆಗೆ ನೆರವಾಗುತ್ತಿದೆ.

21ನೆಯ ಶತಮಾನದ ಪೂರ್ವದಲ್ಲಿ  ಶ್ರೀ. ಎನ್. ದೊರೆಸ್ವಾಮಿಯವರ ಮುಂದಾಳುತನದಲ್ಲಿ ಅಸೋಸಿಯೇಷನ್ನಿನ ದಶಕಗಳ ಕನಸಾಗಿದ್ದ ಆಧುನಿಕ ರಂಗಮಂದಿರ ಪೂರ್ಣವಾಯಿತು. 300 ಆಸನಗಳಿರುವ, ವಾತಾನುಕೂಲವಾದ ಈ ರಂಗಮಂದಿರ ಈ ವರ್ಷದಲ್ಲಿ 300 ದಿನಗಳಂದು ಸತತವಾಗಿ ಸಂಗೀತ, ನೃತ್ಯ, ನಾಟಕಗಳಿಂದ ಗುಣುಗುಣಿಸುತ್ತಿರುತ್ತದೆ. ಈಗ ಶ್ರೀ. ರಾಮಭದ್ರ ಹಾಗೂ ಶ್ರೀ. ನಾರಾಯಣ ಜಾಗೀರ್ದಾರ್  ಅವರ ಮುಂದಾಳುತನದಲ್ಲಿ ಅಸೋಸಿಯೇಷನ್ ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳುತ್ತಿದೆ.

21 ಶತಮಾನದ ಮೊದಲ ದಶಕದಲ್ಲಿ ಆರಂಭಿಸಿದ ಸಂಗೀತ ಹಾಗೂ ನಾಟಕ ಶಿಬಿರಗಳನ್ನು ಅಸೋಸಿಯೇಷನ್ ಪ್ರತಿವರ್ಷ ನಡೆಸಿಕೊಂಡು ಬರುತ್ತಿದೆ.

8 ದಿನಗಳ ಚತುರ್ಭಾಷಾ 'ಗಿರೀಶ್ ಕಾರ್ನಾಡ್ ನಾಟಕೋತ್ಸ'ವನ್ನು ಅಸೋಸಿಯೇಷನ್ 2000 ರಲ್ಲಿ ಜರುಗಿಸಿತು. ಕನ್ನಡ, ಇಂಗ್ಲೀಷ್, ಮರಾಠಿ, ಹಿಂದೀ ಭಾಷೆಯ ಹಲವಾರು ನಾಟಕಕಾರರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದು ರಂಗ ಚಟುವಟಿಕೆಗೆ  ಹೊಸ ಮೆರುಗನ್ನು ಇತ್ತಿತು.  ಗಿರೀಶ್ ಕಾರ್ನಾಡ್  ಜೊತೆಯಲ್ಲಿ ಶ್ರೀ. ವಿಜಯ್ ತೆಂಡೂಲ್ಕರ್, ಶ್ರೀ. ಜಬ್ಬಾರ್ ಪಟೇಲ್, ಶ್ರೀ. ಅಲಿಕ್ ಪದಂಸಿ, ಶ್ರೀ. ಚಂದ್ರಶೇಖರ ಕಂಬಾರ್, ಸಿ. ಆರ್. ಸಿಂಹ ಅವರು ಇದರಲ್ಲಿ ಭಾಗವಹಿಸಿದ್ದರು.

ಇದಲ್ಲದೆ ಅಸೋಸಿಯೇಷನ್ ಹಲವಾರು ಹೆಸರಾಂತ ನಾಟಕಕಾರರು, ನಿರ್ದೇಶಕರನ್ನು ಆಹ್ವಾನಿಸಿ ಅವರ ನಾಟಕಗಳನ್ನಾಡಿಸಿದೆ. ಶ್ರೀ. ಬಿ. ವಿ. ಕಾರಂತ, ಶ್ರೀ. ಚಂದ್ರಶೇಖರ ಕಂಬಾರ್, ಶ್ರೀ. ನಾಗಾಭರಣ, ಶ್ರೀಮತಿ ಬಿ. ಜಯಶ್ರೀ ಮೊದಲಾದವರು ಹಲವಾರು ನಾಟಕಗಳನ್ನು ಆಡಿಸಿದ್ದಾರೆ.

ಸಂಗೀತೋತ್ಸವಗಳು, ಶಿಬಿರಗಳು, ಪ್ರತಿವರ್ಷದ ಚಟುವಟಿಕೆಯಾಗಿದೆ.

“ಶೃಂಗಾರ ರಸ” ಕನ್ರಾಟಕ ಸಂಗೀತದಲ್ಲಿ ಎನ್ನುವ 2 ದಿನಗಳ ಸಂಗೀತ ಸಮ್ಮೇಳನ, ಹಾಗೂ ಶ್ಯಾವ್ಯ ದಾಶ್ರನಿಕ ಉತ್ಸವವನ್ನು 2005 ರಲ್ಲಿ ನಡೆಸಲಾಯಿತು.

ಹೆಸರಾಂತ ಕರ್ನಾಟಕ ಸಂಗೀತಗಾರರಾದ ಶ್ರೀ. ಆರ್. ಕೆ. ಶ್ರೀಕಂಠನ್, ಶ್ರೀ. ಆರ್. ಕೆ. ಪದ್ಮನಾಭ, ಶ್ರೀಮತಿ ಸುಕನ್ಯಾ ಪ್ರಭಾಕರ್, ಶ್ರೀಮತಿ ಎಂ.ಎಸ್.ಶೀಲಾ, ಶ್ರೀಮತಿ ಸತ್ಯವತಿ, ಶ್ರೀಮತಿ ಶ್ರೀಲತಾ ರವರು ಎರಡು ವಾರಗಳ ಶಿಬಿರಗಳನ್ನು ಅಸೋಸಿಯೇಷನ್ನಿನಲ್ಲಿ ನಡೆಸಿಕೊಟ್ಟಿದ್ದಾರೆ.

ಮಕ್ಕಳ ರಂಗ ಶಿಬಿರ ಕೂಡ ಪ್ರತಿವರ್ಷ ನಡೆಯುವ ಒಂದು ಚಟುವಟಿಕೆ.

ಎರಡು ‘ಹೊರನಾಡು ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ'ವನ್ನು ಕರ್ನಾಟಕ ಸರ್ಕಾರದ ಕನ್ನಡ - ಸಂಸ್ಕೃತಿ ಇಲಾಖೆಯೊಡನೆ ಅಸೋಸಿಯೇಷನ್ ನಡೆಸಿದೆ.
ಕರ್ನಾಟಕದ ಹೊರಗೆ ನಡೆದ ಮೊಟ್ಟಮೊದಲ ‘ಸುವರ್ಣ ಕರ್ನಾಟಕ’ ವನ್ನು ಇತ್ತರ ಕನ್ನಡ ಸಂಘ ಸಂಸ್ಥೆಗಳ ಸಹಕಾರದಲ್ಲಿ 2007 ರಲ್ಲಿ ನೆರವೇರಿಸಲಾಯಿತು.

ಇದೇ ಮೈಸೂರು ಅಸೋಸಿಯೇಷನ್ ನಡೆದು ಬಂದ ಹಾದಿ.

ಇದೇ ನಂಬಿಕೆಯಲ್ಲಿ ಸದಸ್ಯರ ಸಹಕಾರದಲ್ಲಿ ಅಸೋಸಿಯೇಷನ್ ಮುಂದೆ ತುಳಿಯುವ ಕಲಾವಂತಿಕೆಯಿಂದ ಕೂಡಿದ ಹಾದಿ ಕೂಡ.

ಈ ಒಂಭತ್ತು ದಶಕಗಳ ದುಡಿಮೆಯ ಕುರುಹಾಗಿ ಅಸೋಸಿಯೇಷನ್ ಒಂದು ಕಲಾಕೇಂದ್ರವನ್ನು ನಿರ್ಮಾಣ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ.

ಈ ಕನಸನ್ನು ನಾವೆಲ್ಲರೂ ಒಟ್ಟಾಗಿ ನಡೆದು ಕೈಗೂಡಿಸುವ ನಂಬಿಕೆ ಅಸೋಸಿಯೇಷನ್ನಿಗೆ ಇದೆ.

Translation: