ಕನ್ನಡ ಸೌರಭ

ಕನ್ನಡ ಸೌರಭ 
 
ಕರ್ನಾಟಕ ರಾಜ್ಯದಾದ್ಯಂತ ನವೆಂಬರ್ ತಿಂಗಳಿನಲ್ಲಿ ಎಲ್ಲೆಲ್ಲೂ ಕನ್ನಡ ರಾಜ್ಯೋತ್ಸವದ ಆಚರಣೆಯ ಸಂಭ್ರಮ ಕಾಣಬರುತ್ತಿದ್ದು, ತನ್ಮೂಲಕ ಕನ್ನಡದ ಡಿಂಡಿಮ ಕೇಳಿ ಬರುತ್ತಿರುತ್ತದೆ. ಈ ವರ್ಷ ಮೈಸೂರು ಅಸೋಸಿಯೇಶನ್ ನಲ್ಲೂ ಕನ್ನಡ ರಾಜ್ಯೋತ್ಸವದ ಕಂಪನ್ನು "ಕನ್ನಡ ಸೌರಭ" ಎಂಬ ಮೂರು ದಿನಗಳ ಉತ್ಸವವನ್ನು ಆಚರಿಸಿ ಎಲ್ಲೆಡೆ ಹರಡುವ ಹುನ್ನಾರ ನಡೆಯಿತು. ಇದಕ್ಕಾಗಿ ೧೪ ಕಲಾವಿದರು ಬೆಂಗಳೂರಿನಿಂದ ಮುಂಬೈ ಗೆ ಆಗಮಿಸಿದ್ದರು. ನವೆಂಬರ್ ೨೧, ೨೨, ೨೩ ಹೀಗೆ ಮೂರು ದಿನಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು. ಇದನ್ನು ಆಯೋಜಿಸಿ ರೂಪಿಸಿಕೊಟ್ಟ ಶ್ರೇಯಸ್ಸು ಶ್ರೀ ಶ್ರೀನಿವಾಸ ಜಿ. ಕಪ್ಪಣ್ಣ ಅವರಿಗೆ ಸಲ್ಲಬೇಕು. ಇವರೆಲ್ಲರಿಗೂ ಮೈಸೂರು ಅಸೋಸಿಯೇಷನ್ ಗೆ ಋಣಿಯಾಗಿರುತ್ತಾರೆ. 
 
ಮೊದಲ ದಿನ ನವೆಂಬರ್ ೨೧ ಶುಕ್ರವಾರ ಸಂಜೆ ೬.೩೦ಕ್ಕೆ ಶ್ರೀ. ಗಿರೀಶ್ ಆರಾಧ್ಯ ಅವರಿಂದ "ಕನ್ನಡ ನಾಯಕ ನಟರ" ಅನುಕರಣೆ ಮತ್ತು ಅದಕ್ಕೂ ಮೊದಲು "ಮಾತನಾಡುವ ಕೋತಿತಿಮ್ಮನ ಕಿತಾಪತಿ" ಎಂಬ ಎರಡು ಹಾಸ್ಯ ಅಂಕಗಳು ಹಾಗೂ ಅನಂತರ ಕನ್ನಡ ನಾಡಿನ ಹೆಸರಾಂತ, 'ಪಾಪಾ ಪಾಂಡು' ಮುಂತಾದ ದೂರದರ್ಶನವಾಹಿನಿ ಕಾರ್ಯಕ್ರಮಗಳಿಂದ ಅಪಾರ ಜನಪ್ರಿಯತೆ ಗಳಿಸಿರುವ ಹಾಸ್ಯ ಸಾಹಿತಿ ಶ್ರೀ ಮ.ನ.ನರಸಿಂಹಮೂರ್ತಿಯವರಿಂದ 'ಸಾಹಿತಿಗಳ ಜೀವನದಲ್ಲಿ ಹಾಸ್ಯ' ಎಂಬ ಪ್ರಸಂಗ ಬಹಳ ಸೊಗಸಾಗಿ ಮೂಡಿ ಬಂದವು. ಕಾರ್ಯಕ್ರಮಕ್ಕೆ ಮೆರುಗಿಟ್ಟಂತೆ 'ತಾರಕ್ ಮೆಹತ ಕೀ ಉಲ್ಟಾ ಚಷ್ಮ' ಎಂಬ ಹಿಂದಿಯ ಜನಪ್ರಿಯ ಹಾಸ್ಯ ದೂರದರ್ಶನ ಧಾರಾವಾಹಿಯ ಲೇಖಕರಾದ ಶ್ರೀ. ರಾಜು ಮತ್ತು ರಾಜನ್ ನರಸಿಂಹಮೂರ್ತಿಯವರು ಅಂದು ನಮ್ಮೊಡನಿದ್ದರು. 
 
ಎರಡನೆಯ ದಿನ ನವೆಂಬರ್ ೨೨ ಶನಿವಾರ ಸಂಜೆ ೫.೩೦ಕ್ಕೆ ಮೊದಲಿಗೆ ರಾಜಗುರು ಹೊಸಕೋಟೆಯವರ ತಂಡ ಜಾನಪದ, ಜಾನಪದಕ್ಕೆ ಸಮಾನವಾದ ಹಳ್ಳಿಯ ಹಾಡುಗಳು (ಅವರ ತಂದೆ ಗುರುರಾಜ ಹೋಸಕೋಟೆಯವರವರು ರಚಿಸಿದ್ದು) ದಾಸರ ಪದಗಳು, ರತ್ನನ್ ಪದಗಳು, ಮಂಕುತಿಮ್ಮನ ಕಗ್ಗ, ರಂಗಗೀತೆ ಮುಂತಾದ ಸುಗಮ ಸಂಗೀತದಿಂದ ನೆರೆದ ರಸಿಕರ ಮನಗೆದ್ದರು. ಶ್ರೀ. ವಿನಯ್ ಶಾಸ್ತ್ರಿಯವರ ಹಾಡುಗಾರಿಕೆಗೆ ಅಸಾಧ್ಯ ಚಪ್ಪಾಳೆ ಬಿಟ್ಟು. "ಒನ್ಸ್ ಮೋರ್' ಗಳೂ ಆದವು.
 
ಸರಿಯಾಗಿ ೭.೩೦ ಕ್ಕೆ ನಾಟಕ 'ಹೀಗೊಂದು   ಜನಪದ ರಾಜನ ಕಥೆ' ಆರಂಭವಾಯಿತು. ನಾಟಕದಲ್ಲಿ ಅನೇಕ ದೂರದರ್ಶನ ಕಲಾವಿದರು ಭಾಗವಹಿಸಿದರು. ನಾಟಕದ ನಿರ್ದೇಶಕಿ ಹೆಸರಾಂತ ರಂಗ ಹಾಗೂ ದೂರದರ್ಶನ ಕಲಾವಿದೆ ಸುಂದರಶ್ರೀ ಕೂಡ ಅಂದು ಜೊತೆಯಲ್ಲಿದ್ದರು. ನಾಟಕ ಪಾತ್ರಕ್ಕೆ ತಕ್ಕ ಪೋಷಾಕು ಸಮರ್ಥ ರಂಗ ನಿರ್ವಹಣೆ ಮತ್ತು ಉತ್ತಮ ನಟನೆಯಿಂದ ಗಮನ ಸೆಳೆಯಿತು. 
 
ಮೂರನೆಯ ದಿನ ಸಭಾ ಕಾರ್ಯಕ್ರಮವಿತ್ತು. 'ಸ್ನೇಹರಂಗ' ತಂಡದ ಮುಖ್ಯಸ್ತರಾಗಿ ಶ್ರೀ ಟಿ. ರಘು ನಾಟಕದ ನಿರ್ಧೇಶಕರಾದ ವಾಲ್ಟರ್ ಡಿಸೋಜಾ, ಮೈಸೂರು ಅಸೋಸಿಯೇಷನ್ ಅಧ್ಯಕ್ಷೆಯಾದ ಕೆ. ಕಮಲಾ, ಮೈಸೂರು ಅಸೋಸಿಯೇಷನ್ನಿನ ಹಿರಿಯ ಕಲಾವಿದ ಕೆ.ಮಂಜುನಾಥಯ್ಯ ಮುಂತಾದವರನ್ನು ಗೌರವಿಸಲಾಯಿತು. 
 
ನಂತರ ನಾಟಕ 'ತುಕ್ಕೋಜಿ' ಪ್ರದರ್ಶನಗೊಂಡಿತು. ಇದು ಪೂರ್ಣಚಂದ್ರ ತೇಜಸ್ವಿ ಯವರ ಒಂದು ಸಣ್ಣ ಕಥೆಯನ್ನು ಆಧರಿಸಿ ರಚನೆಯಾಗಿದೆ. ನಾಟಕಕ್ಕೆ ರೂಪಾನತರಿಸಿದವರು ಶ್ರೀ. ರಮೇಶ್ ಚಂದ್ರ, ನಾಟಕದ ನಿರ್ದೇಶಕರು ವಾಲ್ತ್ಟರ್ ಡಿಸೋಜಾ. ಇದು ಇಂದಿನ ಕಾಲದ ಕಥೆ. ಹೊಸ ಹೊಸ ಅವಿಷ್ಕಾರದೊಂದಿಗೆ ಸಾಮಾಜಿಕ ಪ್ರಗತಿ ಉಂಟಾದಂತೆ ಅದರೊಡನೆ ಹೊಂದಾಣಿಕೆ ಮಾಡಿಕೊಳ್ಳಲು ಹೆಣಗುವಾಗ ಸಾಮಾನ್ಯ ಜನತೆ ಹೇಗೆ ಮಾನಸಿಕ ತುಮುಲದ ಜೊತೆಗೆ ಸಾಂಸಾರಿಕ ಏಉರುಪೇರುಗಳನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ಅತ್ಯಂತ ಮನೋಜ್ಞವಾಗಿ ತೆರೆದಿಟ್ಟ ಶ್ರೇಯಸ್ಸು ಈ ನಾಟಕಕ್ಕೆ ಹಾಗೂ ನಟರಿಗೆ ಸಲ್ಲುತ್ತದೆ. ಎರಡೂ ನಾಟಕದಲ್ಲಿ ಶ್ರೀ. ಟಿ. ರಘು ಹಾಗು ಶ್ರೀಮತಿ ಸಂಧ್ಯಾ ಆಚಾರ್ಯ ಪ್ರಮುಖ ಪಾತ್ರದಲ್ಲಿದ್ದರು.
 
ಈ ಮೊದಲು ತಿಂಗಳಿನ ಆರಂಭದಲ್ಲಿ ಕರ್ನಾಟಕ ರೇಶ್ಮೆಯ ಸೊಬಗನ್ನು 'ಫ್ಯಾಶನ್ ಶೋ' ಹಾಗೂ ರಿಯಾಯತಿ ದರ ಮಾರಾಟದಲ್ಲಿ ಮೆರೆಸಿದ್ದಾಗಿತ್ತು. ಮತ್ತೆ ಕನಕದಾಸರ ಜಯಂತ್ಯುತ್ಸವ ನಡೆಯಿತು. ಈಗ ಮೂರು ದಿನಗಳು ರಂಗಮಂಚದ ಮೇಲೆ ದೃಶ್ಯ ಶ್ರಾವ್ಯ ಕಾರ್ಯಕ್ರಮಗಳ ಪ್ರಯೋಗಗಳಾದವು. ಹಾಗೆಂದು ಮೂರಕ್ಕೆ ಮುಕ್ತಾಯ ಹಾಡೂದೆ ನವೆಂಬರ್ ೨೯ ಕ್ಕೆ ಭಕ್ತಿ ಸಂಗೀತಕ್ಕೆ ಸಂಬಂಧ ಪಟ್ಟಂತೆ ಇನ್ನೊಂದು ಕಾರ್ಯಕ್ರಮವಿತ್ತು. ಹೀಗೆ ಈ ವರ್ಷ ನವೆಂಬರ್ ತಿಂಗಳು ಅಸೋಸಿಯೇಶನ್ ಮುಂಬೈ ಕನ್ನಡಿಗರಿಗೆ ಹರ್ಷದಾಯಕವಾಗಿತ್ತು.